ಡೆಲೇನ್, ಜಾನ್ ತ್ಯಾಡಿಯಸ್
1817-1879. ಲಂಡನಿನ ದಿ ಟೈಮ್ಸ್ ಪತ್ರಿಕೆಯ ಸಂಪಾದಕ (1841-1877). ಅದರ ದಕ್ಷ ಸಂಪಾದಕರ ಪೈಕಿ ಅಗ್ರಶ್ರೇಣಿಗೆ ಸೇರಿದವ. ಪತ್ರಿಕೆಯ ವಿಶೇಷವಾದ ರಾಜಕೀಯ ಪ್ರಭಾವ ದೊರಕಿಸಿಕೊಟ್ಟವನೂ ಅದರ ಪ್ರಸಾರವನ್ನು ಇತರ ಪತ್ರಿಕೆಗಳಿಗಿಂತ ಹಲವು ಮಡಿ ಹೆಚ್ಚಿಸಿದವನೂ ಈತನೇ. 

	ಡೆಲೇನ್ 1817ರ ಅಕ್ಟೋಬರ್ 11ರಂದು ಲಂಡನಿನಲ್ಲಿ ಜನಿಸಿದ. ಖ್ಯಾತ ಬ್ಯಾರಿಸ್ಟರ್ ಡಬ್ಲ್ಯೂ. ಎಫ್. ಎ. ಡೆಲೇನನ ಎರಡನೆಯ ಮಗ. ಅವನು ದಿ ಟೈಮ್ಸ್ ಪತ್ರಿಕೆಯ ಖಜಾಂಚಿಯಾಗಿದ್ದ. ಅದರ ಮಾಲೀಕ ಎರಡನೆಯ ಜಾನ್‍ವಾಲ್ಟರನಿಗೆ ಡೆಲೇನ್ ಪರಿಚಯವಿತ್ತು. ವಾಲ್ಟರ್ ಉತ್ತಮ ಸಂಪಾದಕರ ಆಯ್ಕೆಯಲ್ಲಿ ಸಮರ್ಥನಾಗಿದ್ದ. ಪತ್ರಿಕೆಯ ಮುಂದಿನ ಅಗತ್ಯಗಳಿಗೆ ತಕ್ಕಂತೆ ಡೆಲೇನ್ ಲಂಡನಿನ ಕಿಂಗ್ಸ್ ಕಾಲೇಜಿನಲ್ಲೂ ಆಕ್ಸ್‍ಫರ್ಡಿನ ಮ್ಯಾಗ್ಡಲೀನ್ ಕಾಲೇಜಿನಲ್ಲೂ ವ್ಯಾಸಂಗ ಮಾಡಿದ. 

	ಡೆಲೇನ್ ಆ ಪತ್ರಿಕೆಯನ್ನು ಪ್ರವೇಶಿಸಿದ್ದು ವರದಿಗಾರನಾಗಿ, 1840ರಲ್ಲಿ. ಹತ್ತು ತಿಂಗಳಲ್ಲೇ ಅವನಿಗೆ ಸಂಪಾದಕತ್ವ ದೊರಕಿತು. ಅವನಿಗೆ ಆಗ ಕೇವಲ 23 ವರ್ಷ. ಡೆಲೇನ್ ಸಂಪಾದಕನಾದರೂ ಎಲ್ಲ ಹತೋಟಿಯೂ ವಾಲ್ಟರನ ಕೈಯಲ್ಲೇ ಇತ್ತು. ವಾಲ್ಟರ್ 1847ರಲ್ಲಿ ನಿಧನ ಹೊಂದಿದಾಗ ಡೆಲೇನ್ ಕೈಗೆ ಪತ್ರಿಕೆಯ ಆಡಳಿತ ಸಂಪೂರ್ಣವಾಗಿ ಬಂತು. 

	ಪತ್ರಿಕೆಗೆ ಡೆಲೇನ್ ಅಗ್ರಲೇಖನಗಳನ್ನು ಬರೆದದ್ದು ಕಡಿಮೆ. ಈ ವಿಚಾರದಲ್ಲಿ ಅವನು ತನ್ನ ಹಿಂದಿನಿಂದ ಸಂಪಾದಕರಿಗಿಂತ ಭಿನ್ನವಾಗಿದ್ದ. ಬದಲಾಗಿ ಚುರುಕಿನ ಸಂಪಾದಕೀಯ ವರ್ಗದ ನೇತಾರನಾಗಿದ್ದ. ಆಧುನಿಕ ವ್ಯವಸ್ಥಾಪಕರ ಪೀಳಿಗೆಗೆ ಅವನೇ ಮೊದಲಿಗ. ಬರೆಯಲಾಗುತ್ತಿದ್ದ ಬಹುತೇಕ ಪ್ರತಿ ಪದವನ್ನೂ ಅವನು ಅವಲೋಕಿಸುತ್ತಿದ್ದ. ಸಮಾಜದ ಪ್ರಭಾವಶಾಲಿ ವ್ಯಕ್ತಿಗಳೆಲ್ಲ ಡೆಲೇನನಿಗೆ ಅತ್ಯಂತ ಸುಪರಿಚಿತರಾಗಿದ್ದರು. ಎರಡನೆಯ ಜಾನ್ ವಾಲ್ಟರ್ ಮತ್ತು ಹಿಂದಿನ ಸಂಪಾದಕ ತಾಮಸ್ ಬಾರ್ನ್¸óï ಹಾಕಿಕೊಟ್ಟ ಹಾದಿಯಲ್ಲಿ ಪತ್ರಿಕೆ ಮುನ್ನಡೆಯಿತು. 

	ಜಾನ್ ಡೆಲೇನ್ ನಿರ್ಭೀತ ಸಂಪಾದಕನೆಂದು ಹೆಸರು ಗಳಿಸಿದ. ಬ್ರಿಟನ್ 1854ರಲ್ಲಿ ರಷ್ಯಕ್ಕೆ ನೀಡಿದ ಎಚ್ಚರಿಕೆಯನ್ನು ಆ ರಾಷ್ಟ್ರಕ್ಕೆ ಅದು ತಲಪುವ ಮುನ್ನವೇ ಇವನು ಪ್ರಕಟಿಸಿದ. ರಾಜ್ಯದ ಅನೇಕ ರಹಸ್ಯಗಳು ಪತ್ರಿಕೆಗೆ ಹೇಗೆ ಗೊತ್ತಾಗುವುವೆಂಬುದೇ ಅರ್ಥವಾಗುವುದಿಲ್ಲ; ಇದು ಸರ್ಕಾರಕ್ಕೆ ಅಭಿಮಾನಾಸ್ಪದವಲ್ಲ-ಎಂದು ವಿಕ್ಟೋರಿಯ ರಾಣಿಗೆ ಲಾರ್ಡ್ ಜಾನ್ ರಸೆಲ್ ಹೇಳಿಕೊಳ್ಳುವ ಮಟ್ಟಿಗೆ ಇವನು ಸರ್ಕಾರದ ಅಂತರಂಗವನ್ನೆಲ್ಲ ಬಯಲು ಮಾಡುತ್ತಿದ್ದ. ಈ ಕ್ರಮ ಲಾರ್ಡ್ ಡರ್ಬಿಯ ಕಟುವಾದ ಟೀಕೆಗೆ ಒಳಗಾಯಿತು. ಡೆಲೇನ್ ಅಷ್ಟೇ ತೀಕ್ಷ್ಣವಾಗಿ ಪತ್ರಿಕೆಯ ಮೂಲಕ ಅದಕ್ಕೆ ಉತ್ತರ ಬರೆಸಿದ. ತನ್ನನ್ನು ಟೀಕಿಸದಂತೆ ದಿ ಟೈಮ್ಸ್ ಪತ್ರಿಕೆಯ ಮನವೊಲಿಸಲು ಫ್ರಾನ್ಸಿನ ಲೂಯಿ ನೆಪೋಲಿಯನ್ ಯತ್ನಿಸಿದ. ಯಾವುದಕ್ಕೂ ಡೆಲೆನ್ ಜಗ್ಗಲಿಲ್ಲ.

	ಕ್ರಿಮಿಯನ್ ಯುದ್ಧದಲ್ಲಿ ಬ್ರಿಟಿಷ್ ಪಡೆಗಳ ದುಃಸ್ಥಿತಿಯನ್ನು ವರ್ಣಿಸುವ ಹೊವಾರ್ಡ್ ರಸೆಲನ ವರದಿಗಳನ್ನು ದಿ ಟೈಮ್ಸ್ ಪ್ರಕಟಿಸಿತು. ಸ್ವತಃ ಡೆಲೇನನೇ ರಣರಂಗಕ್ಕೆ ಭೇಟಿ ನೀಡಿದ. ಗಾಯಗೊಂಡ ಸೈನಿಕರಿಗೆ ನೆರವು ನೀಡಲು ಪತ್ರಿಕೆ ನಿಧಿ ಸಂಗ್ರಹಿಸಿತು. 

	ದೈಹಿಕ ದೌರ್ಬಲ್ಯದಿಂದಾಗಿ ಡೆಲೇನ್ ತನ್ನ 59ನೆಯ ವಯಸ್ಸಿನಲ್ಲಿ ನಿವೃತ್ತನಾದ. ಎರಡು ವರ್ಷಗಳ ಅನಂತರ, 1879ರ ನವೆಂಬರ್ 22ರಂದು, ನಿಧನ ಹೊಂದಿದ.
(ಕೆ.ವಿ.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ